ಕಲ್ಪವೃಕ್ಷವೆಂದೇ ಕರೆಯಲಾಗುವ ತೆಂಗಿನ ಮರದ ಎಳನೀರು ಸರ್ವರೋಗಕ್ಕೂ ಮದ್ದಾಗಿದ್ದು, ಮನುಷ್ಯನ ದೇಹದ ಆಯಾಸವನ್ನು ದೂರಾಗಿಸಿ ಉಲ್ಲಾಸ ನೀಡುತ್ತದೆ. ನಿರ್ಜಲೀಕರಣ, ಅಜೀರ್ಣ, ಕಿಡ್ನಿಯಲ್ಲಿ ಕಲ್ಲು, ತಲೆನೋವುಗಳಂತಹ ನಾನಾ ರೋಗಗಳಿಗೆ ಎಳನೀರು ಪ್ರಮುಖ ಮದ್ದಾಗಿದೆ.
ವರ್ಷದ ಎಲ್ಲಾ ದಿನಗಳಲ್ಲೂ ಸಿಗುವ ಎಳನೀರಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಪ್ರತೀನಿತ್ಯ ಒಂದೊಂದು ಎಳನೀರು ಕುಡಿಯುವ ಅಭ್ಯಾಸವಿಟ್ಟುಕೊಂಡರೆ, ದೇಹಕ್ಕೆ ಎದುರಾಗುವ ಸಾಕಷ್ಟು ರೋಗಗಳಿಂದ ದೂರ ಇರಬಹುದು. ನವಿರಾದ ಸಿಹಿ, ನೀರಿನಷ್ಟೇ ಗಾಢವಾದ ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಎಳನೀರಿನಿಂದ ಸಿಗುವ ಪೋಷಕಾಂಶಗಳಿಂದ ದೇಹ ಶೀಘ್ರ ತನ್ನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತದೆ.
ಎಳನೀರಿನಲ್ಲಿರುವ ವಿವಿಧ ಖನಿಜ, ಸಕ್ಕರೆ ಹಾಗೂ ಲವಣಾಂಶ ಅಗತ್ಯ ಪ್ರಮಾಣದಲ್ಲಿ ಇರುವುದರಿಂದಲೇ ಇದೊಂದು ಅಮೃತಪಾನವಾಗಿದೆ. ಬೇಸಿಗೆ ತಾಪವನ್ನು ನೇರವಾಗಿ ನೀಗಿಸಬಲ್ಲ ಎಳನೀರು ದೈವದತ್ತವಾದುದು. ಸರ್ವರೋಗಕ್ಕೂ ಮದ್ದಾಗಿರುವ ಎಳನೀರಿನ ಕೆಲ ಉಪಯೋಗಗಳನ್ನು ಇಲ್ಲಿ ವಿವರಿಸಲಾಗಿದೆ.
1.ನಿರ್ಜಲೀಕರಣ ದೂರ ಮಾಡುತ್ತದೆ
ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ವಿವಿಧ ಬಗೆಯ ಎಲೆ ಕ್ಟ್ರೋಲೈಟ್ಸ್ ಮತ್ತು ಇನ್ನಿತರ ಖನಿಜಾಂಶಗಳನ್ನು ಒಳಗೊಂಡಿರುವ ಎಳನೀರು ನಿಸರ್ಗದತ್ತವಾಗಿ ಸಿಗುವ ಒಂದು ಆರೋಗ್ಯಕರವಾದ ನೈಸರ್ಗಿಕ ಪಾನೀಯವಾಗಿದೆ.
ಇದು ನಮ್ಮ ದೇಹದ ನಿರ್ಜಲೀಕರಣ ಸಮಸ್ಯೆಯನ್ನು ದೂರ ಮಾಡುವ ಜೊತೆಗೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ ಮತ್ತು ಅನೇಕ ತರಹದ ಕಾಯಿಲೆಗಳು ನಮ್ಮನ್ನು ತಾಗದಂತೆ ನೋಡಿಕೊಳ್ಳುತ್ತದೆ.
2.ಹೃದಯಕ್ಕೆ ತುಂಬಾ ಒಳ್ಳೆಯದು
ಎಳನೀರನ್ನು ಕುಡಿಯುವುದರಿಂದ ನಮ್ಮ ಹೃದಯದ ಆರೋಗ್ಯ ಬಹಳ ಚೆನ್ನಾಗಿ ನಿರ್ವಹಣೆ ಆಗುತ್ತದೆ. ಇದರಿಂದ ನಮ್ಮ ಹೃದಯಕ್ಕೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ದೂರ ವಾಗುತ್ತವೆ.
ಎಳನೀರಿನಲ್ಲಿ ಪೊಟ್ಯಾಶಿಯಂ ಪ್ರಮಾಣ ಹೇರಳವಾಗಿ ಕಂಡುಬರುವುದರಿಂದ ಇದು ನಮ್ಮ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸುವುದರ ಜೊತೆಗೆ ಹೃದಯ ರಕ್ತನಾಳದ ಕಾಯಿಲೆಗಳನ್ನು ದೂರ ಮಾಡಲು ನೆರವಾಗುತ್ತದೆ.
ಹೀಗಾಗಿ ರಕ್ತದ ಒತ್ತಡ ಮತ್ತು ಹೃದಯದ ಸಮಸ್ಯೆ ಇರುವವರು ಎಳನೀರನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
3.ಕಿಡ್ನಿ ಕಲ್ಲುಗಳು ದೂರವಾಗುತ್ತವೆ
ಮೆಗ್ನೀಷಿಯಂ ಮತ್ತು ಪೊಟ್ಯಾಶಿಯಂ ಪ್ರಮಾಣ ಹೆಚ್ಚಿನ ಪ್ರಮಾಣದ ಲ್ಲಿರುವ ಎಳನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಮೂತ್ರಪಿಂಡಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಏಕೆಂದರೆ ಕಿಡ್ನಿಗಳು ಅಚ್ಚುಕಟ್ಟಾಗಿ ಕೆಲಸ ಮಾಡಲು ನೆರವಾಗುವು ದರಲ್ಲಿ ಎಳನೀರು ಸಹಾಯಕ್ಕೆ ಬರುತ್ತದೆ. ಇದೊಂದು ಮೂತ್ರ ವರ್ಧಕ ವಾಗಿ ಕೆಲಸ ಮಾಡುವುದು ಮಾತ್ರವಲ್ಲ, ನಮ್ಮ ಕಿಡ್ನಿಗಳ ಅನೇಕ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಣ ಮಾಡುವಲ್ಲಿ ಸಹ ನೆರವಿಗೆ ಬರುತ್ತದೆ. ಎಳನೀರು ಕುಡಿಯುವವರಿಗೆ ಕಿಡ್ನಿ ಕಲ್ಲುಗಳು ಮೂತ್ರದ ಮೂಲಕ ಹೊರ ಹೋಗುತ್ತವೆ ಎಂದು ಹೇಳುತ್ತಾರೆ.
4.ಗರ್ಭಿಣಿಯರಿಗೂ ಒಳ್ಳೆಯದು
ಗರ್ಭಿಣಿ ಮಹಿಳೆಯರಿಗೆ ಎಳನೀರು ಬಹಳ ಒಳ್ಳೆಯದು ಎನ್ನುವ ಮಾತಿದೆ. ಇದು ಬಾಯಾರಿಕೆಯನ್ನು ದೂರ ಮಾಡುವುದು ಮಾತ್ರವಲ್ಲದೆ ನೈಸರ್ಗಿಕ ವಾಗಿ ಗರ್ಭಾವಸ್ಥೆಯಲ್ಲಿ ಅವರಿಗೆ ಎದುರಾಗುವ ಗ್ಯಾಸ್ಟ್ರಿಕ್, ಎದೆಯುರಿ, ಮಲಬದ್ಧತೆ ಇತ್ಯಾದಿಗಳನ್ನು ದೂರ ಮಾಡುವಲ್ಲಿ ನೆರವಾಗುತ್ತದೆ.
ಗರ್ಭಿಣಿ ಮಹಿಳೆಯರು ಎಳನೀರಿನಂತಹ ನೈಸರ್ಗಿಕ ಪಾನೀಯವನ್ನು ಅಭ್ಯಾಸ ಮಾಡಿಕೊಳ್ಳುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.
5.ಸಕ್ಕರೆ ಕಾಯಿಲೆಗೂ ಮದ್ದು
ಸಾಮಾನ್ಯವಾಗಿ ಸಿಹಿಯಾಗಿರುವ ಪದಾರ್ಥ ಹಾಗೂ ನೀರೆಂದರೆ ಮದುಮೇಹಿಗಳು ದೂರ ಉಳಿಯುವುದುಂಟು. ಆದರೆ, ಎಳನೀರು ಬ್ಲಡ್ ಶುಗರ’ನ್ನು ನಿಯಂತ್ರಿಸುತ್ತದೆ. ಎಳನೀರಿನಲ್ಲಿ ಮೆಗ್ನೀಸಿಯಮ್ ಹೇರಳವಾಗಿದ್ದು, ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
6.ಆಯಾಸ ದೂರಾಗಿಸುತ್ತದೆ
ವ್ಯಾಯಾಮದ ಬಳಿಕ ದೇಹ ಸುಸ್ತಾದಂತೆ ಎನಿಸುತ್ತದೆ. ಈ ವೇಳೆ ಎಳನೀರನ್ನು ಕುಡಿಯುವುದರಿಂದ ದೇಹಕ್ಕೆ ಶಕ್ತಿಯೊದಗುತ್ತದೆ. ನಿರ್ಜಲೀಕರಣದಂತಹ ಸಮಸ್ಯೆಗಳನ್ನೂ ಎಳನೀರು ದೂರಾಗಿಸುತ್ತದೆ.
7.ತೂಕ ಇಳಿಕೆಗೂ ಸಹಾಯಕ
ಎಳನೀರು ಸೇವನೆಯ ಪ್ರಮುಖ ಉಪಯೋಗಗಳ ಪೈಕಿ ದೇಹದ ತೂಕ ಕಳೆದುಕೊಳ್ಳುವಿಕೆಯೂ ಕೂಡ ಒಂದಾಗಿದೆ. ಎಳನೀರಿನಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು, ಕೊಬ್ಬಿನಾಂಶ ಕಡಿಮೆ ಇರುತ್ತದೆ. ಫೈಬರ್ ದೇಹದ ಜೀರ್ಣ ಕ್ರಿಯೆ ನಿಧಾನಗೊಳಿಸಿ, ಹಸಿವನ್ನು ನಿಗ್ರಹಿಸುತ್ತದೆ. ಇದು ನಿಮಗೆ ಹೊಟ್ಟಿ ತುಂಬಿದ ಭಾವವನ್ನು ನೀಡುತ್ತದೆ. ಇದರಂದ ಬಹುಬೇಗ ದೇಹದ ತೂಕವನ್ನು ಇಳಿಕೆ ಮಾಡಬಹುದು.
8.ಚರ್ಮದ ಆರೈಕೆಗೂ ಸಿದ್ದೌಷಧಿ ಎಳನೀರು
ದೀರ್ಘಕಾಲ ವಯಸ್ಸಾಗದಂತೆ ಉಳಿಯಲು ಎಳನೀರು ಸಹಾಯ ಮಾಡುತ್ತದೆ. ಮುಖದಲ್ಲಿ ಮೊಡವೆಗಳು ಮತ್ತು ರಾಡಿಕಲ್ ಗಳನ್ನು ನಿವಾರಿಸುತ್ತದೆ. ತೆಂಗಿನ ಕಾಯಿ ನೀರನ್ನು ಮೊಡವೆ, ಕಲೆಗಳು, ಸುಕ್ಕುಗಳು, ಸೆಲ್ಯುಲೈಟ್ ಮತ್ತು ಎಸ್ಟಿಮಾ ಜಾಗಗಳಿಗೆ ನಿರಂತರವಾಗಿ ಎರಡರಿಂದ ಮೂರು ವಾರಗಳ ಕಾಲ ರಾತ್ರಿ ಹಚ್ಚಿ ಮಲಗಿದರೆ ತ್ವಚೆ ಸ್ವಚ್ಛವಾಗುತ್ತದೆ ಹಾಗೂ ಕಾಂತಿಯುತವಾಗುತ್ತದೆ. ಹೆಚ್ಚೆಚ್ಚು ಎಳನೀರು ಕುಡಿಯುವುದರಿಂದ ಚರ್ಮದಲ್ಲಿರುವ ಹೆಚ್ಚಿನ ಆಯಿಲ್ ಅಂಶ ಕಡಿಮೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಫೇಷಿಯಲ್ ಕ್ರೀಮ್ ಗಳು, ಶ್ಯಾಂಪುಗಳು, ಕಂಡೀಷನರ್ ಹಾಗೂ ಲೋಷನ್ ಗಳಲ್ಲಿ ಎಳನೀರು ಬಳಕೆ ಮಾಡುತ್ತಿರುವುದೂ ಕೂಡ ಸಾಮಾನ್ಯವಾಗಿ ಹೋಗಿದೆ.
ಹೆಚ್ಚು ಉಷ್ಣಾಂಶ ಇರುವ ಪ್ರದೇಶದಲ್ಲಿರುವ ಜನರು ಎಳನೀರನ್ನು ಹೆಚ್ಚಾಗಿ ಕುಡಿಯಬೇಕು. ಇದು ಚರ್ಮ ನಿರ್ಜಲೀಕರಣಗೊಳ್ಳದಂತೆ ಕಾಯುತ್ತದೆ. ಅಲ್ಲದೆ, ಚರ್ಮಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನೂ ನೀಡುತ್ತದೆ. ಎಷ್ಟೆಲ್ಲಾ ಉಪಯೋಗವಿರುವ ಎಳನೀರನ್ನು ನಮ್ಮ ಪ್ರತೀನಿತ್ಯದ ಆಹಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಳ್ಳುವುದರಿಂದ ಸಾಕಷ್ಟು ಉಪಯೋಗಗಳನ್ನು ಪಡೆಯಬಹುದಾಗಿದೆ.
ಇದೊಂದು ನ್ಯಾಚುರಲ್ ಎನರ್ಜಿ ಡ್ರಿಂಕ್
ವ್ಯಾಯಾಮ ಮಾಡುವವರು ತಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಪ್ರತಿದಿನ ಒಂದು ಲೋಟ ಎಳನೀರು ಕುಡಿಯುವುದರಿಂದ ಇದು ಸಾಧ್ಯವಿದೆ.
ವ್ಯಾಯಾಮ ಮಾಡುವ ಮುಂಚೆ ಎಳನೀರು ಕುಡಿದು ಆನಂತರ ವ್ಯಾಯಾಮದಲ್ಲಿ ತೊಡಗುವುದು ಬಹಳ ಅನುಕೂಲಕರ. ಅದೇ ರೀತಿ ವ್ಯಾಯಾಮ ಮಾಡಿದ ನಂತರವೂ ಕೂಡ ದೇಹದಿಂದ ನಷ್ಟವಾದ ನೀರಿನ ಅಂಶವನ್ನು ಮತ್ತೆ ತುಂಬಿಸಿಕೊಳ್ಳಲು ಎಳನೀರನ್ನು ಸೇವಿಸುವುದು ಅಗತ್ಯವಾಗಿದೆ.ಇದರಿಂದ ದೇಹಕ್ಕೆ ಬೇಕಾದ ಕ್ಯಾಲೋರಿಗಳು ಮತ್ತು ಖನಿಜಾಂಶಗಳು ಸಿಗುತ್ತಾ ಹೋಗುತ್ತವೆ. ನಮ್ಮ ದೇಹಕ್ಕೆ ಪೌಷ್ಟಿಕಾಂಶಗಳ ಕೊರತೆ ಎದುರಾಗುವುದಿಲ್ಲ.